ಪರಿಸರದ ಆರೋಗ್ಯ ಕಾಪಾಡುವ ಸಗಣಿ ಜೀರುಂಡೆಗಳು (ಕಸ ಕೀಟಗಳು)

Open PDF in new window.

Paul Manning 1, Xin Rui Ong2, Eleanor M. Slade2

1 Faculty of Agriculture, Dalhousie University, Canada2 Asian School of the Environment, College of Science, Nanyang Technological University, Singapore

ಸಗಣಿ ಜೀರುಂಡೆಗಳ ಪ್ರಭೇದದ ಎಲ್ಲ ಕೀಟಗಳು ಪ್ರಾಣಿಗಳ ಮಲ ಅಥವಾ ಸಗಣಿಯನ್ನೇ ತಮ್ಮ ಆಹಾರವಾಗಿ ಹಾಗೂ ವಾಸಸ್ಥಾನವಾಗಿ ಉಪಯೋಗಿಸುತ್ತವೆ. ಈ ಕೀಟಗಳು ಸಗಣಿಯನ್ನು ಜೀರ್ಣಿಸಿ ಮತ್ತೆ ಮಣ್ಣಿಗೆ ಸೇರಿಸಿ ಪೋಷಕಾಂಶಗಳ ಚಕ್ರದಲ್ಲಿ ಮರುಬಳಕೆಯನ್ನು ಸುಲಭವಾಗಿಸುತ್ತವೆ. ಈ ಕೀಟಗಳು ಮಾನವ-ರೂಪಿತ ಪರಿಸರದಲ್ಲೂ ಸಹ ತುಂಬಾ ಸಹಾಯಕವಾಗಿವೆ. ಬೀಜ ಪ್ರಸಾರ, ಜಾನುವಾರುಗಳಲ್ಲಿ ಹರಡುವ ಕ್ರಿಮಿಕೀಟಗಳ ನಿಯಂತ್ರಣ, ಸಸ್ಯಸಂಕುಲದ ಬೆಳವಣಿಗೆಯಲ್ಲಿ ಸಹಾಯ ಹೀಗೆ ಅವುಗಳ ಕಾಣಿಕೆ ಬಹುಮುಖ್ಯ. ಈ ಲೇಖನದಲ್ಲಿ ನಾವು ಮೊದಲು ಈ ಸಗಣಿ ಜೀರುಂಡೆಗಳ ಬಗ್ಗೆ ಕಲಿಯೋಣ ಹಾಗೂ ಪರಿಸರದ ಸಮತೋಲನ ಮತ್ತು ವ್ಯವಸಾಯದಲ್ಲಿ ಅವುಗಳ ಪಾತ್ರ ಮತ್ತು ಪ್ರಾಮುಖ್ಯತೆಯನ್ನು ಕೂಡ ಅರಿಯೋಣ.

ಸಗಣಿ ಜೀರುಂಡೆಗಳ ಬಗ್ಗೆ ಮೂಲಭೂತ ಅಂಶಗಳು

ನೀವೆಲ್ಲ ಈ ಸಗಣಿ ಜೀರುಂಡೆಗಳನ್ನು ನೋಡಿರಬಹುದು. ಒಂದು ಬಾರಿ ಈ ಕೀಟಗಳು ಸಗಣಿಯಿಂದ ಉಂಡೆ ಮಾಡುವುದನ್ನು ನೋಡಿದ್ದರೆ ಆ ನೋಟವನ್ನು ಸುಲಭದಲ್ಲಿ ಮರೆಯಲಾಗದು. ಈ ಜೀರುಂಡೆಗಳು ಕೇವಲ ನಮ್ಮ ಭಾಗದಲ್ಲಲ್ಲ, ಅಂಟಾರ್ಕಟಿಕ ಖಂಡ ಒಂದನ್ನು ಹೊರತುಪಡಿಸಿ, ಜಗತ್ತಿನ ಎಲ್ಲ ಮೂಲೆಗಳಲ್ಲೂ ಕಂಡುಬರುತ್ತವೆ. ಹೆಸರೇ ಹೇಳುವಂತೆ ಈ ಕೀಟಗಳು ಸಸ್ತನಿಗಳ ಮಲವನ್ನೇ/ಸಗಣಿಯನ್ನೇ ಆಹಾರ ಹಾಗೂ ಗೂಡು ಕಟ್ಟುವಿಕೆಯಲ್ಲಿ ಬಳಸಿಕೊಳ್ಳುತ್ತವೆ. ಆದರೆ ಕೆಲವು ಜಾತಿಗಳು ಮಾಂಸ, ಹಣ್ಣು, ಶಿಲೀಂಧ್ರ, ಮೃತ ಕೀಟಗಳ ಕೊಳೆಯುವಿಕೆಯಲ್ಲೂ ಪಾತ್ರವಹಿಸುತ್ತವೆ. ಎಲ್ಲ ಜೀರುಂಡೆಗಳ ಹಾಗೆ ಇವಕ್ಕೂ ಕೂಡ ಎರಡು ಜೊತೆ ರೆಕ್ಕೆಗಳು ಇರುತ್ತವೆ. ಒಳಗಿನ ರೆಕ್ಕೆಗಳು ಸ್ವಲ್ಪ ಮೃದು, ಇವು ಹಾರಾಟಕ್ಕೆ ಅವಶ್ಯಕ. ಹೊರಗಿನವು ತುಂಬಾ ಗಟ್ಟಿ, ರಕ್ಷಾ ಕವಚದ ಹಾಗೆ. ಇವಕ್ಕೆ ಆ್ಯಂಟೆನಾ ಸಹ ಇರುತ್ತವೆ. ಕೆಲ ಜಾತಿಗಳ ಗಂಡು ಹುಳುಗಳಿಗೆ ವಿಶೇಷ ರೀತಿಯ ಕೊಂಬುಗಳು ಕೂಡ ಇರುತ್ತವೆ. ಹೆಣ್ಣು ಹುಳುವನ್ನು ಮೆಚ್ಚಿಸಲು ನಡೆಯುವ ಗಂಡು ಹುಳುಗಳ ನಡುವಿನ ಜಗಳದಲ್ಲಿ ಈ ಕೊಂಬುಗಳಿಗೆ ಭಾರೀ ಪ್ರಾಮುಖ್ಯತೆ. ಈವರೆಗೂ ಸುಮಾರು 7,000 ಜಾತಿಯ ಸಗಣಿ ಜೀರುಂಡೆಗಳು ಪತ್ತೆಯಾಗಿವೆ. ಹಾಗೆಯೇ ಈ ಪಟ್ಟಿ ಪ್ರತಿವರ್ಷ ಬೆಳೆಯುತ್ತಲೂ ಇದೆ.

ಆಹಾರ ಮತ್ತು ವಸತಿ ಪದ್ಧತಿಗಳ ಆಧಾರದ ಮೇಲೆ ಈ ಜೀರುಂಡೆಗಳನ್ನು ಮೂರು ಗುಂಪುಗಳಲ್ಲಿ ವಿಂಗಡಿಸಲಾಗಿದೆ.

೧. ಮೊದಲನೆಯದು ನಿವಾಸಿ (Dwellers) ಗುಂಪು. ಇವು ಸಗಣಿಯ ಗುಡ್ಡೆ ಇರುವಲ್ಲಿ ಬಂದು ಆ ಗುಡ್ಡೆಯೊಳಗೇ ನೆಲೆಸಲು ಆರಂಭಿಸುತ್ತವೆ. ಆ ಸಗಣಿಯ ಗುಡ್ಡೆಯ ಒಳಗೇ ಅವುಗಳ ಸಂತಾನೋತ್ಪತ್ತಿ ನಡೆಯುತ್ತದೆ. ಹೆಣ್ಣು ಜೀರುಂಡೆ ಇಟ್ಟ ಮೊಟ್ಟೆಗಳು ಒಡೆದು, ಹೊರಬರುವ ಅಪಕ್ವ ಮರಿಗಳಿಗೆ ‘ಲಾರ್ವಾ’ ಎಂದು ಹೆಸರು. ಈ ಲಾರ್ವಾಗಳ ಪೂರ್ಣ ಬೆಳವಣಿಗೆ ಆ ಸಗಣಿಯ ಗುಡ್ಡೆಯೊಳಗೆ ನಡೆಯುತ್ತದೆ. ಅವುಗಳಿಗೆ ಅದುವೆ ಮನೆ ಅದುವೇ ಆಹಾರ!

೨. ಎರಡನೇ ಗುಂಪು ಸುರಂಗಗಾರರದು (Tunnellers). ಹೆಣ್ಣು ಜೀರುಂಡೆಗಳು ಸಗಣಿ ಗುಡ್ಡೆಯೊಂದನ್ನು ಗುರುತಿಸಿ ಅಲ್ಲಿಂದ ಮಣ್ಣಿನೊಳಗೆ ಸುರಂಗವನ್ನು ಕೊರೆಯಲು ಆರಂಭಿಸುತ್ತವೆ. ಸಗಣಿಯ ಚಿಕ್ಕ ಚಿಕ್ಕ ತುಂಡುಗಳನ್ನು ಸುರಂಗದೊಳಗೆ ಎಳೆದೊಯ್ಯುತ್ತವೆ. ಈ ತುಂಡುಗಳಿಗೆ ‘Brood ball’ (ಬ್ರೂಡ್ ಬಾಲ್ ) ಎಂದು ಹೆಸರು. ಅಂದರೆ ‘ಸಂತಾನದ ಚೆಂಡು’. ಗಂಡು-ಕೀಟಗಳು ಈ ಹೆಣ್ಣು ಕೀಟ ಮತ್ತು ಅವುಗಳ ಸುರಂಗಕ್ಕಾಗಿ ಹೋರಾಡುತ್ತವೆ. ಜಯಶಾಲಿ ಗಂಡು ಕೀಟವು ಮುಂದೆ ಆ ಹೆಣ್ಣು ಮೊಟ್ಟೆ ಇಟ್ಟು ಮರಿಗಳು ಬೆಳೆಯುವವರೆಗೂ ಆ ಸುರಂಗವನ್ನು ಕಾಯುತ್ತದೆ.

೩. ಇನ್ನು ಮೂರನೆಯದು ಉರುಳುಗಾರರ (Rollers) ಗುಂಪು. ಗಂಡು ಕೀಟಗಳು ತಮ್ಮ ಹಿಂದಿನ ಕಾಲುಗಳನ್ನು ಬಳಸಿ ಸಗಣಿಯ ಚೆಂಡುಗಳನ್ನು ಮಾಡುತ್ತವೆ. ಹೆಣ್ಣು ಕೀಟಕ್ಕೆ ಆ ಚೆಂಡು ಒಪ್ಪಿಗೆ ಇದ್ದರೆ ಗಂಡು ಅದನ್ನು ಉರುಳಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗಿ ಮಣ್ಣಿನಲ್ಲಿ ಹೂತು ಹಾಕುತ್ತದೆ. ಹೂತು ಹಾಕಿದ ಆ ಉಂಡೆಯೊಳಗೆ ಹೆಣ್ಣು ಮೊಟ್ಟೆ ಇಡುತ್ತದೆ. ಲಾರ್ವಾಗಳು ಅದೇ ಉಂಡೆಯಲ್ಲಿ ಪೂರ್ಣವಾಗಿ ಬೆಳೆಯುತ್ತವೆ.

ಯಾವುದೇ ಗುಂಪಿನ ಸಗಣಿ ಜೀರುಂಡೆಯಾದರೂ, ಅವುಗಳ ಜೈವಿಕ ಕ್ರಿಯೆಗಳ ಮೂಲಕ ಸಾವಯವ ಪೋಷಕಾಂಶಗಳು (organic matter) ಮಣ್ಣಿಗೆ ಸೇರಿ ಅದರೊಳಗೆ ಬೆರೆತುಕೊಳ್ಳುತ್ತವೆ. ಮಣ್ಣಿನಲ್ಲಿನ ಇತರ ಜೀವಿಗಳಿಗೆ, ಸೂಕ್ಷ್ಮಾಣುಗಳಿಗೆ ಇದು ಅತಿ ಮುಖ್ಯ. ಅಷ್ಟೇ ಅಲ್ಲದೆ ಸಸ್ಯಗಳ ಬೇರುಗಳಿಗೆ ಪೋಷಕಾಂಶಗಳ ವರ್ಧಕ ದೊರೆತಂತೆ.

ಉಷ್ಣವಲಯದ ಅರಣ್ಯಗಳಲ್ಲಿ ಸಗಣಿ ಜೀರುಂಡೆಗಳು

ಜೀರುಂಡೆಗಳು ಸಗಣಿಯ ಮೂಲಕ ಪ್ರಾಣಿಗಳೊಡನೆ ಸಂಬಂಧ ಬೆಳೆಸಿಕೊಳ್ಳುತ್ತವೆ. ಯಾವ ಗಿಡಮರಗಳ ಬೀಜಗಳನ್ನು ಈ ಜೀರುಂಡೆಗಳು ಹರಡಿಸುತ್ತವೋ ಅವುಗಳ ಜೊತೆಯೂ ಸಂಬಂಧ ಇದ್ದಂತೆ ಅಲ್ಲವೇ? ಹಾಗಾದರೆ ಆ ಪ್ರಾಣಿಗಳಿಗೂ ಮತ್ತು ಗಿಡಮರಗಳಿಗೂ ಸಂಬಂಧವಿದ್ದಂತೆ. ಹಾಗಾಗಿಯೇ ಯಾವುದೋ ಒಂದು ಪ್ರಭೇದದ ಪ್ರಾಣಿ ನಶಿಸಿ ಹೋಯಿತೆಂದರೆ ಅದರ ಪರಿಣಾಮ ಜೀರುಂಡೆಗಳ ಮೇಲೆ ಆಗುತ್ತದೆ. ಅಂತೆಯೇ ಆ ಪ್ರಾಣಿ ಜಾತಿಯ ಮೂಲಕ ಯಾವ ಯಾವ ಸಸ್ಯಗಳ ಬೀಜಗಳು ಎಲ್ಲೆಡೆ ಹರಡುತ್ತಿದ್ದವೋ ಅವುಗಳ ಮೇಲೂ ಪರಿಣಾಮ ಆಗುತ್ತದೆ. ಸಸ್ಯಕ್ಕೂ ಅವುಗಳ ಸಂಕುಲಕ್ಕೂ ಧಕ್ಕೆ ಉಂಟಾಗುತ್ತದೆ. ನಾವು ಈ ದೊಡ್ಡ ಪ್ರಾಣಿಗಳ ಹಾಗೂ ಈ ಸಗಣಿ ಜೀರುಂಡೆಗಳ ನಡುವಿನ ಸಂಬಂಧಗಳನ್ನು ಹೆಚ್ಚು ಅರಿಯಲು ಬ್ರಾಜಿಲ್, ಸಿಂಗಾಪುರ್ ಹಾಗೂ ಮಲೇಷಿಯಾದ ಕಾಡುಗಳಲ್ಲಿ ಅಧ್ಯಯನ ಮಾಡುತ್ತಿದ್ದೇವೆ.

ಕಾಡುಗಳ ನಾಶದಂತಹ ದುರಾದೃಷ್ಟಕರ ಘಟನೆಗಳಿಂದ ವಿಶಾಲವಾಗಿ ಹರಡಿದ್ದ ಕಾಡು ಈಗ ಚಿಕ್ಕ ಚಿಕ್ಕ ತುಂಡುಗಳಾಗುತ್ತಿದೆ. ಹಾಗಾಗಿ ಈ ಕಾಡುಗಳಲ್ಲಿನ ಜೀವವೈವಿಧ್ಯವೂ ಕಡಿಮೆಯಾಗುತ್ತಿದೆ. ದೊಡ್ಡ, ಚಿಕ್ಕ, ಎಲ್ಲ ಬಗೆಯ ಪ್ರಾಣಿಗಳ ಜಾತಿಗಳೂ ಕಡಿಮೆಯಾಗುತ್ತಿವೆ. ಇದರ ಪರಿಣಾಮವಾಗಿ ಅವುಗಳ ಮಲದ ಮೇಲೆ ಅವಲಂಬಿತ ಜೀರುಂಡೆಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ನಮ್ಮ ಊಹೆಯ ಪ್ರಕಾರ ಜೀರುಂಡೆಗಳ, ಪ್ರಾಣಿಗಳ ಹಾಗೂ ಗಿಡಮರಗಳ ನಡುವಿನ ಸಂಬಂಧಗಳ ಜಾಲ ಮಾನವ ಚಟುವಟಿಕೆಗಳಿಂದ ಹಾಳಾಗಿರುವ, ತುಂಡು ತುಂಡಾದ ಕಾಡುಗಳಲ್ಲಿ ಬಹಳ ಸರಳೀಕೃತಗೊಂಡಿವೆ. ಆದರೆ ವಿಶಾಲವಾದ ಪ್ರಶಾಂತ ಕಾಡುಗಳಲ್ಲಿ ಈ ಸಂಬಂಧಗಳು ಬಲು ಸಂಕೀರ್ಣವಾಗಿರುತ್ತವೆ

ಈ ಊಹೆಯನ್ನು ಪರೀಕ್ಷಿಸಲು ವಿವಿಧ ಪ್ರಾಣಿಗಳ ಸಗಣಿಯನ್ನು ಬಲೆಯಲ್ಲಿಟ್ಟು ತೋಟಗಳಲ್ಲಿ, ತುಂಡಾದ (ವಿಭಜನೆಗೊಂಡ) ಕಾಡುಗಳಲ್ಲಿ ಹಾಗೂ ವಿಶಾಲ ದಟ್ಟ ಕಾಡುಗಳಲ್ಲಿ ಇರಿಸಲಾಯಿತು. ಈ ಎರಡು ರೀತಿಯ ಕಾಡುಗಳಲ್ಲಿ ಎಷ್ಟು ತರಹದ ಜೀರುಂಡೆಗಳು, ಯಾವ ಯಾವ ಜಾತಿಯ ಜೀರುಂಡೆಗಳು ಇರಿಸಿದ ಬಲೆಯೆಡೆಗೆ ಬಂದಿದ್ದವು ಎಂಬುದನ್ನು ಗಮನಿಸಲಾಯಿತು. ವಿಶಾಲ ಕಾಡುಗಳಲ್ಲಿ ಪ್ರಾಣಿಗಳ ಸಗಣಿ ಹಾಗೂ ಜೀರುಂಡೆಗಳ ನಡುವಿನ ಸಂಬಂಧ ಜಾಸ್ತಿ ಗಟ್ಟಿಯಾದದ್ದು. ಗಿಡ ಕಡಿಯುವುದು, ಅರಣ್ಯ ನಾಶ, ವಿಭಾಜೀಕರಣದಂತಹ ಕಾರಣಗಳಿಂದ ಸುಲಭವಾಗಿ ಬದಲಾಗದಂತಹದ್ದು. ಈ ಜೀರುಂಡೆಗಳಿಗೆ ಇದೇ ಸಗಣಿ ಬೇಕು ಅದೇ ಸಗಣಿ ಬೇಕು ಎನ್ನುವ ಮಾನವನಂತಹ ಬಯಕೆಗಳಿಲ್ಲ. ದೊಡ್ಡ ಸಸ್ತನಿಯ ಜಾತಿಯೊಂದು ಅಳಿಸಿ ಹೋದರೆ ಬಹಳಷ್ಟು ಜೀರುಂಡೆಗಳು ಬೇರೆ ಪ್ರಾಣಿಯ ಸಗಣಿಯ ಬಳಕೆಗೆ ಸಾಮಾನ್ಯವಾಗಿ ಹೊಂದಿಕೊಳ್ಳುತ್ತವೆ.

ಹಾಗೆಂದು ಎಲ್ಲ ಸಗಣಿ ಜೀರುಂಡೆಗಳು ಹಾಗೇ ಎಂದು ತಿಳಿಯಬೇಡಿ. ಕೆಲ ಜಾತಿಯ ಜೀರುಂಡೆಗಳು ನನ್ನ, ನಿಮ್ಮ ಹಾಗೆಯೇ ಬಲು ಸೂಕ್ಷ್ಮ (choosy). ಕೆಲವು ಪ್ರಾಣಿಗಳ ಸಗಣಿ ಜೀರುಂಡೆಗಳಿಗೆ ವಿಶೇಷ. ಅಂತೆಯೇ ಆ ಸಗಣಿಗೆ ಹೆಚ್ಚಿನ ಆದ್ಯತೆ. ಇನ್ನೂ ಕೆಲವು ಜೀರುಂಡೆಗಳು ಕೇವಲ ಒಂದು ಬಗೆಯ ಸಗಣಿಯನ್ನಷ್ಟೇ ತಮ್ಮ ಆಹಾರ ಮತ್ತು ವಸತಿಗೆಂದು ಉಪಯೋಗಿಸುತ್ತವೆ. ಇವುಗಳಿಗೆ ಇಂಗ್ಲೀಷ್ ನಲ್ಲಿ ‘Specialists‘ ಅಂದರೆ ’ವಿಶೇಷಜ್ಞರು’ ಎಂಬ ಬಿರುದು.

ಇವು ಹೆಬ್ಬಾವುಗಳ ಮಲವನ್ನೂ ಸಹ ತಮ್ಮ ಆಹಾರವನ್ನಾಗಿಸಿಕೊಳ್ಳುತ್ತವೆ!

ಪ್ರಾಣಿ ಹಾಗೂ ಜೀರುಂಡೆಗಳ ನಡುವಿನ ಸಂಬಂಧ ತುಂಡು ತುಂಡಾದ (ವಿಭಜಿತ) ಕಾಡುಗಳಲ್ಲೂ ಹಾಗೂ ತೋಟಗಳಲ್ಲಿಯೂ ಬಹಳ ಸರಳವಾದದ್ದು, ಮೇಲು ಮೇಲಿನ ಸಂಬಂಧದಂತೆ. ಅಂದರೆ ಕಡಿಮೆ ಜಾತಿಯ ಪ್ರಾಣಿಗಳು ಹಾಗೂ ಸಸ್ಯಗಳು ಮತ್ತು ಕಡಿಮೆ ಸಂಖ್ಯೆಯ ಜೀರುಂಡೆಗಳು.

ನಮಗೆ ಸರಳವಾಗಿ ಲಭ್ಯವಾಗುವ ಸಗಣಿಯನ್ನು ಮಾತ್ರ ನಾವು ಬಲೆಗಳಲ್ಲಿ ಇರಿಸಲು ಸಾಧ್ಯವಾಗಿತ್ತು. ಸಗಣಿ ಬಲೆಗಳನ್ನು ಇರಿಸುವುದರಿಂದ ಜೀರುಂಡೆಗಳು ಸಗಣಿಯೆಡೆಗೆ ಆಕರ್ಷಿತಗೊಳ್ಳುತ್ತವೆಯೋ ಇಲ್ಲವೋ ಎಂಬುದು ಮಾತ್ರ ತಿಳಿಯುತ್ತದೆ. ಆ ಜೀರುಂಡೆಗಳು ಅದೇ ಸಗಣಿಯನ್ನು ತಿನ್ನುತ್ತವೆಯೋ ಇಲ್ಲವೋ ಎಂಬುದು ತಿಳಿಯುವುದಿಲ್ಲ. ಆದರೆ ಈಗ ಅನೇಕ ಪ್ರಯೋಗಾಲಯದ/ವೈಜ್ಞಾನಿಕ ವಿಧಾನಗಳ ಮೂಲಕ ಈ ಜೀರುಂಡೆಗಳು ಯಾವ ಪ್ರಾಣಿಯ ಸಗಣಿಯನ್ನು ತಮ್ಮ ಆಹಾರವನ್ನಾಗಿಸಿಕೊಂಡಿವೆ ಎಂಬುದನ್ನು ಕಂಡು ಹಿಡಿಯಬಹುದಾಗಿದೆ. ಆದ್ದರಿಂದ ನಮ್ಮ ಸದ್ಯದ ಅಧ್ಯಯನವು ಈ ಜೀರುಂಡೆಗಳ ಜೀರ್ಣಾಂಗ ವ್ಯವಸ್ಥೆಯನ್ನು ಅರಿತುಕೊಳ್ಳುವುದು ಹಾಗೂ ಅದರ ಮೂಲಕ ಅವು ಸೇವಿಸಿದ ಸಗಣಿ ಯಾವ ಪ್ರಾಣಿಯದ್ದು ಎಂಬುದನ್ನು ಗುರುತಿಸುವುದಾಗಿದೆ. ಈ ಪ್ರಯತ್ನದಿಂದ ಈ ಜೀರುಂಡೆಗಳ ಬಗ್ಗೆ ಹಾಗೂ ಜೀರುಂಡೆ- ಪ್ರಾಣಿ ಸಂಬಂಧಗಳ ಬಗ್ಗೆ ಹೆಚ್ಚು ಹೆಚ್ಚು ಅರಿಯಬೇಕು ಎಂಬುದು ನಮ್ಮ ಆಸೆ. ಇಂತಹ ವಿಧಾನಗಳ ಮೂಲಕ ಮರಗಳ ಕೊಡೆಯಾಕಾರದ ಮೇಲ್ಛಾವಣಿಗಳ (canopy) ಮೇಲಿರುವ ಜೀರುಂಡೆಗಳ ಅಂದರೆ ಅತ್ಯಂತ ಅಸಹಜವಾದ, ಅಭ್ಯಸಿಸಲು ಬಲು ಕಷ್ಟವಿರುವ ಜೀರುಂಡೆಗಳ ಬಗ್ಗೆಯೂ ತಿಳಿದುಕೊಳ್ಳಬಹುದು. ಹೌದು ಮರಗಳ ಕೊಡೆಯಾಕಾರದ ಮೇಲ್ಛಾವಣಿಗಳ ಮೇಲೆಯೂ ಜೀರುಂಡೆಗಳಿರುತ್ತವೆ!

ಕೃಷಿ ವ್ಯವಸ್ಥೆಯಲ್ಲಿ ಸಗಣಿ ಜೀರುಂಡೆಗಳು

ವ್ಯವಸಾಯದಲ್ಲಿಯೂ ಜೀರುಂಡೆಗಳ ಪಾತ್ರ ದೊಡ್ಡದು. ತಜ್ಞರು ಇವುಗಳು ಹೇಗೆ ಆಹಾರ ಉತ್ಪಾದನೆಯಲ್ಲಿ ಸಹಾಯಕ ಎಂಬುದನ್ನು ಅಭ್ಯಸಿಸಿದ್ದಾರೆ. ಕೆಲವು ಜಾತಿಯ ನೊಣಗಳು ಜಾನುವಾರುಗಳನ್ನು ಕಚ್ಚಿ ಕಾಟ ಕೊಡುತ್ತವೆ. ಈ ನೊಣಗಳು ಪ್ರಾಣಿಗಳ ಸಗಣಿಯಲ್ಲಿ ಮೊಟ್ಟೆ ಇಟ್ಟು ಹುಟ್ಟಿದ ಮರಿಗಳು ಆ ಸಗಣಿಯನ್ನು ಆಹಾರವನ್ನಾಗಿಸಿಕೊಳ್ಳುವಂತೆ ವ್ಯವಸ್ಥೆ ಮಾಡುತ್ತವೆ. ಹಾಗೆ ತಮ್ಮ ಸಂಖ್ಯೆಗಳನ್ನು ವೃದ್ಧಿಗೊಳಿಸಿಕೊಳ್ಳುತ್ತವೆ. ಆದರೆ ಜೀರುಂಡೆಗಳು ಸಗಣಿಯನ್ನು ಮಣ್ಣಿನಲ್ಲಿ ಹೂಳಿ ಬೆರೆಸುವುದರಿಂದ ನೊಣಗಳಿಗೆ ಮೊಟ್ಟೆ ಇಡಲು ಸಾಧ್ಯವಾಗದಂತೆ ಮಾಡುತ್ತವೆ. ಹಾಗಾಗಿ ಜಾನುವಾರುಗಳಿಗೆ ಕಾಟ ತಪ್ಪುತ್ತದೆ.

ಕೆಲ ಪರಾವಲಂಬಿ (ಪರೋಪಜೀವಿ) ಕ್ರಿಮಿಗಳು (parasites) ಆಹಾರದ ಮುಖಾಂತರ ಜಾನುವಾರುಗಳ ಹೊಟ್ಟೆಯನ್ನು ಸೇರುತ್ತವೆ. ಈ ಕ್ರಿಮಿಗಳು ಜಾನುವಾರುಗಳ ಹೊಟ್ಟೆಯೊಳಗೆ ಬೆಳೆದು ಮೊಟ್ಟೆ ಇಡುತ್ತವೆ. ಆ ಮೊಟ್ಟೆಗಳು ಜಾನುವಾರುಗಳ ಸಗಣಿಯ ಮೂಲಕ ಹೊರಬರುತ್ತವೆ. ಮೊಟ್ಟೆಯೊಡೆದು, ಲಾರ್ವಾಗಳು ಹುಲ್ಲು ಸಸ್ಯಗಳೊಳಗೆ ಹರಡುತ್ತವೆ. ಇವು ಪುನಃ ಜಾನುವಾರುಗಳು ತಿನ್ನುವ ಎಲೆ ಹುಲ್ಲುಗಳ ಮೂಲಕ ಮತ್ತೆ ಜಾನುವಾರುಗಳ ಹೊಟ್ಟೆ ಸೇರುತ್ತವೆ. ಇದು ಸುಲಭವಾಗಿ ರೋಗಗಳು ಹರಡುವ ಒಂದು ಚಕ್ರವಾಗುತ್ತದೆ.

ಸಗಣಿಯಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿದರೆ ಸಗಣಿ ಒಳಗಿನ ನೀರಿನಂಶ ಕಡಿಮೆಯಾಗಿ ಬೇಗನೆ ಒಣಗುತ್ತದೆ. ಹಾಗಾಗಿ ಪರಾವಲಂಬಿ ಕ್ರಿಮಿಗಳು ಬದುಕುವುದು ಕಷ್ಟವಾಗುತ್ತದೆ. ಜೀರುಂಡೆಗಳ ಸುರಂಗ ಕೊರೆಯುವ ಕ್ರಿಯೆಯಿಂದ ಸಗಣಿಯಲ್ಲಿನ ಪೋಷಕಾಂಶಗಳು ಮಣ್ಣು ಸೇರುತ್ತವೆ. ಮಣ್ಣಿನಲ್ಲಿ ಬೆರೆತು ಒಂದಾಗುತ್ತವೆ. ಇದು ಸಸ್ಯಗಳಿಗೆ ಖುಷಿಯ ಸಂಗತಿಯಲ್ಲವೇ? ಈ ಜೀರುಂಡೆಗಳು ಗಾತ್ರದಲ್ಲಿ ಚಿಕ್ಕವು. ಅವುಗಳ ಜೀವನವು ರಹಸ್ಯಮಯ. ಆದ್ದರಿಂದ ಅನೇಕ ರೈತರಿಗೆ ಈ ಜೀರುಂಡೆಗಳು ತಮ್ಮ ಹೊಲಗದ್ದೆಗಳಲ್ಲಿ ಏನೇನೆಲ್ಲಾ ಕೆಲಸ ಮಾಡುತ್ತವೆ ಎಂಬುದು ಗೊತ್ತಿರದ ವಿಷಯ. ಗಾತ್ರ ಚಿಕ್ಕದಾದರೆ ಏನಂತೆ ಇವು ಯುರೋಪಿನ ಯುನೈಟೆಡ್ ಕಿಂಗ್ಡಂನ ಜಾನುವಾರು ಉದ್ಯಮ ಒಂದರಲ್ಲೇ £367 ಮಿಲಿಯನ್, ಅಂದರೆ 3,400 ಕೋಟಿ ರೂಪಾಯಿಗಳಷ್ಟು ದುಡ್ಡು ಪೋಲಾಗಿ ಹೋಗುವುದನ್ನು ತಡೆಯುತ್ತವೆ!

ಈ ಜೀರುಂಡೆಗಳಿಗೆ ಸುತ್ತಮುತ್ತಲಿನ ಹುಲ್ಲುಗಾವಲಿನ, ಸಸ್ಯ ಜಗತ್ತಿನ ಆರೋಗ್ಯ ಬಲು ಮುಖ್ಯ. ತಜ್ಞರು ಐರ್ಲೆಂಡ್ ದೇಶದ ವಿವಿಧ ಜಾನುವಾರು ಸಾಕಾಣಿಕೆ ಕೇಂದ್ರಗಳಲ್ಲಿ ಜೀರುಂಡೆಗಳ ಮೇಲೆ ಅಧ್ಯಯನ ಮಾಡಿದರು. ಕೆಲವು ಕೇಂದ್ರಗಳು ರಾಸಾಯನಿಕ ಗೊಬ್ಬರದ ಮೇಲೆ ಆಧಾರಿತ ಇನ್ನು ಕೆಲವು ಸಂಪೂರ್ಣವಾಗಿ ಸಾವಯವ. ಈ ಅಧ್ಯಯನದ ಮೂಲಕ ತಜ್ಞರ ಪ್ರಕಾರ ಸಾವಯವ ಹೊಲಗಳಲ್ಲಿ ಜೀರುಂಡೆಗಳು ಹೆಚ್ಚು ಸಮೃದ್ಧವಾಗಿಯೂ, ಹೆಚ್ಚು ಸಂಖ್ಯೆಯಲ್ಲಿಯೂ ಬೆಳೆಯುತ್ತವೆ, ಅಲ್ಲಿನ ಸಸ್ಯವರ್ಗವನ್ನು ವೃದ್ಧಿ ಮಾಡುತ್ತವೆ. ಆದರೆ ಇವುಗಳ ಚಟುವಟಿಕೆಯಿಂದ ಮಣ್ಣಿನಲ್ಲಿ ಗಾಳಿಯ ರಂಧ್ರಗಳ ಸಂಖ್ಯೆ ಹೆಚ್ಚಾಗುವುದಿಲ್ಲ.

ರಾಸಾಯನಿಕ ಗೊಬ್ಬರಗಳ ಹಾಗೂ ಕೀಟನಾಶಕಗಳ ಬಳಕೆ ಜೀರುಂಡೆಗಳಿಗೆ ಅಪಾಯಕಾರಿ. ಜಾನುವಾರುಗಳನ್ನು ವಿವಿಧ ಸೋಂಕುಗಳಿಂದ ರಕ್ಷಿಸಲು ಕೀಟನಾಶಕಗಳನ್ನು ಬಳಸಲಾಗುತ್ತದೆ. ಉಣ್ಣೆ, ಚಿಗಟಗಳಂತಹ ಕೀಟಗಳು ಜಾನುವಾರುಗಳಿಗೆ ದೊಡ್ಡ ಕಾಟ. ಈ ಕೀಟಗಳು ಜಾನುವಾರುಗಳ ರಕ್ತ ಹೀರುವುದಷ್ಟೇ ಅಲ್ಲದೆ ಸೋಂಕುಗಳನ್ನೂ ಹರಡುತ್ತವೆ.

ಜಾನುವಾರುಗಳು ಇಂತಹ ಕೀಟನಾಶಕಗಳನ್ನು ತಮ್ಮ ಮಲದ ಮೂಲಕ ಹೊರ ಹಾಕುತ್ತವೆ. ಈ ಕೀಟನಾಶಕಗಳಿಂದ ಉದ್ದೇಶಿತ ಕೀಟಗಳು ಸಾಯುವುದಲ್ಲದೆ ಪ್ರಾಣಿಗಳ ಮಲದ ಮೇಲವಲಂಬಿತ ಜೀರುಂಡೆಗಳ ಮೇಲೆಯೂ ಪರಿಣಾಮವಾಗುತ್ತದೆ. ಈ ರಾಸಾಯನಿಕ ಔಷಧಗಳ ಪರಿಣಾಮವಾಗಿ ಜೀರುಂಡೆಗಳ ಸಂತಾನೋತ್ಪತ್ತಿಯಲ್ಲಿ ಏರುಪೇರುಗಳಾಗುತ್ತವೆ. ಅಲ್ಲದೇ, ಅವು ಸಾಯಲೂಬಹುದು ಎಂದು ಅನೇಕ ವರ್ಷಗಳ ನಂತರ ನಮಗೆ ತಿಳಿದುಬಂದಿದೆ. ಇದರಿಂದ ಜೀರುಂಡೆಗಳ ಜಾತಿಗಳ ಸಂಖ್ಯೆ ಕಡಿಮೆ ಆಗುತ್ತದೆ. ಹಾಗಾಗಿ ಮಣ್ಣಿಗೆ ಸೇರಬೇಕಾದ ಸಗಣಿಯ ಪ್ರಮಾಣವೂ, ಪೋಷಕಾಂಶಗಳ ಪ್ರಮಾಣವೂ ಕಡಿಮೆ ಆಗುತ್ತವೆ. ರಾಸಾಯನಿಕಗಳ ಹಾಗೂ ಕೀಟನಾಶಕಗಳ ಮಿತವಾದ ಬಳಕೆಯಿಂದ ರೈತರು ತಮ್ಮ ಜಮೀನಿನ ಜೀರುಂಡೆಗಳ ಸಂಕುಲವನ್ನು ಉಳಿಸಿಕೊಳ್ಳಬಹುದು.

ಕುತೂಹಲಕಾರಿ ಮತ್ತು ಅಮೂಲ್ಯ ಸಗಣಿ ಜೀರುಂಡೆಗಳು

ಈಗ ನೀವೇ ನೋಡಿದ್ದೀರಿ, ಈ ಜೀರುಂಡೆಗಳ ಕೊಡುಗೆ ಎಷ್ಟು ಅಪಾರ ಎಂದು. ಪರಿಸರದ ಸಮತೋಲನ ಕಾಪಾಡುವುದು, ಜಾನುವಾರುಗಳಲ್ಲಿ ಕ್ರಿಮಿಗಳು ಅತಿ ಹೆಚ್ಚಾಗದಂತೆ ತಡೆಯುವುದು, ಮಣ್ಣಿನ ಗುಣಮಟ್ಟ ಹೆಚ್ಚಿಸುವುದು, ಸೋಂಕುಗಳಿಂದ ಜಾನುವಾರುಗಳನ್ನು ರಕ್ಷಿಸುವುದು ಹೀಗೆ ಅನೇಕಾನೇಕ ಕ್ರಿಯೆಗಳನ್ನು ನಿಭಾಯಿಸುವುದು ಇವುಗಳ ಕೆಲಸ. ಇವುಗಳ ಮೂಲಕ ನಾವು ಪರಿಸರದ ಬಗ್ಗೆಯೂ ತಿಳಿಯಬಹುದು.

ನಾವು ಓದಿದಂತೆ ಸಸ್ತನಿಗಳ ಹಾಗೂ ಜೀರುಂಡೆಗಳ ಮಧ್ಯೆ ಸಂಬಂಧವಿದೆ. ಜೀರುಂಡೆಗಳಲ್ಲಿ ಸಮತೋಲನ ಬದಲಾದರೆ ಅದಕ್ಕೆ ತಕ್ಕಂತೆ ಸಸ್ತನಿಗಳಲ್ಲಿ ಏನು ಬದಲಾವಣೆಗಳಾಗುತ್ತಿವೆ ಎಂಬುದನ್ನು ತಿಳಿಯಲು ಪ್ರಯತ್ನಿಸಬಹುದು.

ಜೀರುಂಡೆಗಳು ಇನ್ನಿತರ ಮಣ್ಣಿನ ಕೀಟಗಳೊಡನೆ ಸೇರಿ ಮಣ್ಣಿನ ಫಲವತ್ತತೆಯನ್ನು ವರ್ಧಿಸುತ್ತವೆ. ಕೀಟನಾಶಕಗಳ ಉಪಯೋಗದಿಂದ ಕಡಿಮೆಯಾಗುತ್ತಿರುವ ಮಣ್ಣಿನ ಜೀವಿಗಳಿಂದ ಭೂಮಿಯ ಫಲವತ್ತತೆ ಕಡಿಮೆ ಆಗಬಹುದು. ಭೂಮಿ ಬರಡಾಗುವ ಸಾಧ್ಯತೆಗಳೂ ಅಷ್ಟೇ ಹೆಚ್ಚು.

ಈ ಜೀರುಂಡೆಗಳ ಅನೇಕ ವಿಭಿನ್ನ ಕ್ರಿಯೆಗಳು ಅಧ್ಯಯನಕಾರರ ಗಮನ ಸೆಳೆದಿವೆ. ಇವು ಹೇಗೆ ನಮ್ಮ ಭೂಗ್ರಹವಿರುವ ಕ್ಷೀರಪಥದ ಸಹಾಯದಿಂದ ತಮ್ಮ ದಾರಿಯನ್ನು ಹುಡುಕಿಕೊಳ್ಳುತ್ತವೆ ಎಂಬುದು ಅಧ್ಯಯನಗಳ ಮೂಲಕ ಗೊತ್ತಾಗಿದೆ. ಈ ಜೀರುಂಡೆಗಳ ಮೂಲಕ ಬೀಜಗಳನ್ನು ಹರಡಿಸಲು ಕೆಲವು ಸಸ್ಯಗಳು ಹೇಗೆ ತಮ್ಮ ಬೀಜಗಳನ್ನು ಜಿಂಕೆಗಳ ಮಲದಂತೆ ಕಾಣುವ ಮತ್ತು ವಾಸನೆಯನ್ನು ಸೂಸುವ ತಂತ್ರವನ್ನು ಹುಡುಕಿಕೊಂಡಿವೆ ಎಂಬ ಸಂಗತಿಯೂ ಬೆಳಕಿಗೆ ಬಂದಿದೆ. ಎಂತಹ ವಿಸ್ಮಯದ ಸಂಗತಿಯಲ್ಲವೇ?

ಎಲ್ಲಿಯೇ ಹೋದರೂ ಈ ಜೀವಿಗಳ ಮೇಲೊಂದು ಕಣ್ಣಿಡಿ. ನೀವೂ ಹೊಸದೊಂದು ವಿಷಯವನ್ನು ಕಂಡುಹಿಡಿಯಬಹುದು, ಅಲ್ಲವೇ!

ಶಬ್ದಕೋಶ

ಪ್ರಭೇದ** (ಪ್ರಜಾತಿ)**

ಜೀವಶಾಸ್ತ್ರದಲ್ಲಿನ ಶ್ರೇಣಿಗಳಲ್ಲಿ ಒಂದು ಬಗೆ ಅಥವಾ ಪ್ರಕಾರ

ಅಪಕ್ವ

ಬೆಳೆಯುತ್ತಿರುವ, ಇನ್ನೂ ಪೂರ್ತಿಯಾಗಿ ಬೆಳೆಯದ

**ಉಷ್ಣವಲಯ **

ಉಷ್ಣವಲಯದ ಪ್ರದೇಶಗಳು ಭೂಮಿಯ ಮೇಲಿನ ಕರ್ಕಾಟಕ ವೃತ್ತ (23.5° ಉತ್ತರ ಅಕ್ಷಾಂಶ) ಮತ್ತು ಮಕರ ಸಂಕ್ರಾಂತಿ ವೃತ್ತ (23.5° ದಕ್ಷಿಣ ಅಕ್ಷಾಂಶ) ನಡುವೆ ಇರುವ ಪ್ರದೇಶಗಳಾಗಿವೆ. ಈ ಪ್ರದೇಶಗಳಲ್ಲಿ ವರ್ಷವಿಡೀ ಬೆಚ್ಚಗಿನ ತಾಪಮಾನ, ಹೆಚ್ಚಿನ ಆರ್ದ್ರತೆ ಮತ್ತು ಮಳೆ ಇರುತ್ತದೆ.

**ಪರಾವಲಂಬಿ **

ತಮ್ಮ ಆಹಾರಕ್ಕಾಗಿ ಬೇರೆ ಜೀವಿಗಳ (ಪೋಷಕ ಜೀವಿ) ಮೇಲೆ ಅವಲಂಬಿಸುತ್ತವೆ. ಕೆಲವು ಪರಾವಲಂಬಿಗಳು ಪೋಷಕ ಜೀವಿಗಳಿಗೆ ಧಕ್ಕೆ ಉಂಟು ಮಾಡುತ್ತವೆ.

**ಕ್ಷೀರಪಥ **

ನೂರಾರು ನಕ್ಷತ್ರಗಳಿರುವ ಒಂದು ಆಕಾಶಗಂಗೆ. ನಮ್ಮ ಭೂಗ್ರಹವು ಇದರಲ್ಲೇ ಇದೆ.

**ಸಸ್ತನಿ **

ಮರಿಗಳಿಗೆ ಮೊಲೆಯ ಹಾಲು ಕುಡಿಸಿ ಬೆಳೆಸುವ ಜೀವ ಜಾತಿ

**ನಿಶಾಚರ **

ರಾತ್ರಿಯ ಸಮಯದಲ್ಲಿ ಹೆಚ್ಚು ಸಕ್ರಿಯವಾಗಿರುವ

ACKNOWLEDGMENTS

We were grateful to Chien C. Lee for allowing us to use his photos of dung beetles taken in Sabah, Malaysia—his photography can be found at www.chienclee.com.

REFERENCES

[1] Raine EH, Slade EM. 2019 Dung beetle–mammal associations: methods, research trends and future directions. Proc. R. Soc. B 286: 20182002. doi:10.1098/rspb.2018.2002

[2] Ong XR, Slade EM & Lim MLM. Dung beetle-megafauna trophic networks in Singapore’s fragmented forests. Biotropica. In press. doi:10.1111/btp.12840

[3] Nichols, E., Spector, S., Louzada, J., Larsen, T., Amezquita, S., Favila, M., & The Scarabaeinae Research Network. (2008). Ecological functions and ecosystem services of Scarabaeinae dung beetles. Biological Conservation, 141, 1461-1474. doi:10.1016/j.biocon.2008.04.011

[4] Beynon, S. A., Wainwright, W. A., & Christie, M. (2015). The application of an ecosystem services framework to estimate the economic value of dung beetles to the UK cattle industry. Ecological Entomology, 40, 124-135. In review

[5] Hutton, S. A., & Giller, P. S. (2003). The effects of the intensification of agriculture on northern temperate dung beetle communities. Journal of Applied Ecology, 40(6), 994-1007.

[6] Manning, P., Slade, E. M., Beynon, S. A., & Lewis, O. T. (2017). Effect of dung beetle species richness and chemical perturbation on multiple ecosystem functions. Ecological Entomology, 42(5), 577-586.

EDITED BY: Helen Phillips, German Centre for Integrative Biodiversity Research (iDiv), Germany

CITATION: Manning P, Ong XR and Slade EM (2021) Soil Ecosystems Change With Time. Front. Young Minds. 9:543498. doi: 10.3389/frym.2021.543498

**CONFLICT OF INTEREST: **The authors declare that the research was conducted in the absence of any commercial or financial relationships that could be construed as a potential conflict of interest.

COPYRIGHT © 2021 Manning, Ong and Slade. This is an open-access article distributed under the terms of the Creative Commons Attribution License (CC BY). The use, distribution or reproduction in other forums is permitted, provided the original author(s) and the copyright owner(s) are credited and that the original publication in this journal is cited, in accordance with accepted academic practice. No use, distribution or reproduction is permitted which does not comply with these terms.

YOUNG REVIEWERS

FDR-HB_PERU iGEM TEAM, AGE: 14 – 17

We are a synthetic biology team with the international Genetically Engineered Machine (iGEM) in Lima, Peru. We are the only high school team in Latin America and are proud of our work with creating a detector for cadmium using bacteria. Most of us are second language learners and the age range of our group is 14–17 years old. We love GMOs!

AUTHORS

PAUL MANNING

Paul is a post-doctoral fellow at the Faculty of Agriculture at Dalhousie University. He holds a B.Sc. in agriculture from the Nova Scotia Agricultural College, and a D.Phil. in Zoology from the University of Oxford. He has been working on dung beetle ecology and toxicology since 2013. His research aims to understand how insect communities support ecosystem functions (like dung decomposition) in agricultural ecosystems. Paul is also interested in elevating public understanding and appreciation of insects through speaking to community groups, working with youth, and conducting research through participatory citizen science.*paul.manning@dal.ca

XIN RUI ONG

Xin Rui is a Ph.D. student at the Asian School of the Environment in Nanyang Technological University. She graduated from the National University of Singapore with a B.Sc. in Life Sciences, specializing in Environmental Biology. Xin Rui was first introduced to the fascinating world of dung beetles during her undergraduate years and is now studying the diversity of dung beetles and their interactions with mammal communities in Southeast Asia.

ELEANOR M. SLADE

Eleanor is an Assistant Professor at the Asian School of the Environment. She holds a B.Sc. in Zoology from the University of Leeds, a M.Sc. in Ecology from Aberdeen University, and a D.Phil. in Zoology from the University of Oxford. Eleanor is an ecologist whose research focuses on the conservation, management, and restoration of tropical forest landscapes and agricultural systems. She is particularly interested in invertebrates and has been studying dung beetles and their importance for healthy ecosystems for 17 years. Eleanor is also interested in using science to help inform policy and best practices in the oil palm industry.

ಅನುವಾದಕ

ನೈದಿಲೆ** ****ಕುಲಕರ್ಣಿ **

ನೈದಿಲೆ ಕುಲಕರ್ಣಿ, ಅಹಮದಾಬಾದ್ ವಿಶ್ವವಿದ್ಯಾಲಯದಲ್ಲಿ ಜೀವಶಾಸ್ತ್ರದಲ್ಲಿ ( Life Sciences ) ತಮ್ಮ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಪರಿಸರ ವಿಜ್ಞಾನ ಮತ್ತು ಪ್ರಾಣಿಗಳ ನಡವಳಿಕೆ, ವರ್ತನೆಗಳ ಅಭ್ಯಾಸಗಳಲ್ಲಿ ವಿಶೇಷ ಆಸಕ್ತಿ ಮತ್ತು ಕುತೂಹಲ ಉಳ್ಳವರಾಗಿದ್ದಾರೆ. ಹಾವುಗಳ ಮತ್ತು ಅವುಗಳ ವಿಷದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಹೆಚ್ಚಿನ ಅಧ್ಯಯನ ಮಾಡುತ್ತಿದ್ದಾರೆ.

FUNDING (TRANSLATION)

The team Translating Soil Biodiversity acknowledges support of the German Centre for integrative Biodiversity Research (iDiv) Halle-Jena-Leipzig funded by the German Research Foundation (DFG FZT 118, 202548816).

CITATION (TRANSLATION)

This is an open-access article distributed under the terms of the Creative Commons Attribution License (CC-BY 4.0). The use, distribution or reproduction in other forums is permitted, provided the original author(s) and the copyright owner(s) are credited and that the original publication in this journal is cited, in accordance with accepted academic practice. No use, distribution or reproduction is permitted which does not comply with these terms.

Recommended citation format: Manning P, Ong XR and Slade EM (2025) Soil Ecosystems Change With Time. (Kannada translation: Naidile Kulkarni). Translating Soil Biodiversity & Front. Young Minds. Originally published in [2021], doi: 10.3389/frym.2021.543498


Figures

Figure 1 : (A) ನಿವಾಸಿ ಜೀರುಂಡೆ (Dweller Dung Beetle); Aphodius rutipes, ಇದೊಂದು ನಿಶಾಚರ ಜೀವಿ. ಹೆಚ್ಚಾಗಿ ಕೃಷಿ ಗದ್ದೆಗಳಲ್ಲಿ ಕಂಡುಬರುತ್ತದ? Figure 1 : (A) ನಿವಾಸಿ ಜೀರುಂಡೆ (Dweller Dung Beetle); Aphodius rutipes, ಇದೊಂದು ನಿಶಾಚರ ಜೀವಿ. ಹೆಚ್ಚಾಗಿ ಕೃಷಿ ಗದ್ದೆಗಳಲ್ಲಿ ಕಂಡುಬರುತ್ತದೆ. ಇವು ಬಾವಲಿಗಳಿಗೆ ಆಹಾರ. (B) ಸುರಂಗಕಾರ ಜೀರುಂಡೆ (Tunnellers) Onthophagus coenobita; ಹೆಚ್ಚಾಗಿ ಕೃಷಿ ಗದ್ದೆಗಳಲ್ಲಿ ಕಂಡುಬರುತ್ತದೆ. ಚಿಕ್ಕ ಕ್ರಿಮಿಕೀಟಗಳು ಜಿರುಂಡೆಗಳನ್ನು ವಾಹನಗಳಂತೆ ಉಪಯೋಗಿಸಿ ಒಂದು ಸಗಣಿ ಗುಡ್ಡೆಯಿಂದ ಇನ್ನೊಂದು ಗುಡ್ಡೆಯನ್ನು ತಲುಪುತ್ತವೆ. (C) ಗಂಡು Proagoderus watanabei (ಸುರಂಗಕಾರರ ಗುಂಪಿಗೆ ಸೇರಿದ್ದು) ಮಲೇಷಿಯಾದ ಸಾಬಹ ವಲಯದಲ್ಲಿ ಸಗಣಿಯನ್ನು ತಿನ್ನುತ್ತಿರುವ ದೃಶ್ಯ. (D) ಉರುಳುಗಾರ (Rollers) ಜಾತಿಯ ಜೀರುಂಡೆ ; Paragymnopleurus marus, ಹಿಂಗಾಲುಗಳಿಂದ ಸಗಣಿ ಚಂಡನ್ನು ಸುರಕ್ಷಿತ ಸ್ಥಳಕ್ಕೆ ತಳ್ಳಿಕೊಂಡು ಹೊರಟಿರುವುದು. ಈ ಜಾತಿಯು ಸಹಜವಾಗಿ ಮಲೇಷಿಯಾದ ಸಾಬಹ ವಲಯದಲ್ಲಿ ಕಂಡುಬರುತ್ತದೆ.

Figure 2 : (A) ನಿವಾಸಿ ಜೀರುಂಡೆಗಳು ಸಗಣಿಯ ಗುಡ್ಡೆಯ ಒಳಗೆ ಮೊಟ್ಟೆ ಇಡುತ್ತವೆ. ಮೊಟ್ಟೆ ಒಡೆದು ಹೊರಬರುವ ಮರಿಗಳ ಸಂಪೂರ್ಣ Figure 2 : (A) ನಿವಾಸಿ ಜೀರುಂಡೆಗಳು ಸಗಣಿಯ ಗುಡ್ಡೆಯ ಒಳಗೆ ಮೊಟ್ಟೆ ಇಡುತ್ತವೆ. ಮೊಟ್ಟೆ ಒಡೆದು ಹೊರಬರುವ ಮರಿಗಳ ಸಂಪೂರ್ಣ ಬೆಳವಣಿಗೆ ಆ ಗುಡ್ಡೆಯೊಳಗೇ ಆಗುತ್ತದೆ. (B) ಸುರಂಗ ಕೊರೆಯುವ ಜೀರುಂಡೆಗಳು ಮಣ್ಣಿನಲ್ಲಿ ಸುರಂಗಗಳನ್ನು ಕೊರೆದು ಅದರೊಳಗೆ ಸಗಣಿಯ ಚಿಕ್ಕ ಚಿಕ್ಕ ಸಂತಾನದ ಚೆಂಡು (Brood balls) ಗಳನ್ನು ಮಾಡುತ್ತದೆ. ಮರಿಗಳಿಗೆ ಆ ಚೆಂಡುಗಳೇ ಆಹಾರ ಮತ್ತು ಮನೆ. (C) ಉರುಳುಗಾರ ಜೀರುಂಡೆಗಳು ತಾವು ಮಾಡಿದ ಸಗಣಿ ಚೆಂಡನ್ನು ಸುರಕ್ಷಿತವಾದ ಸ್ಥಳಕ್ಕೆ ತಳ್ಳಿಕೊಂಡೊಯ್ದು ಅದನ್ನು ಅಲ್ಲಿ ಮಣ್ಣಿನೊಳಗೆ ಹೂಳುತ್ತವೆ. ಹೆಣ್ಣು ಜೀರುಂಡೆ ಆ ಚಂಡಿನಲ್ಲಿ ಮೊಟ್ಟೆಗಳನ್ನು ಇಡುತ್ತದೆ.

Figura 3 : ಸಸ್ತನಿಗಳ, ಸಗಣಿ ಜೀರುಂಡೆಗಳ ಮತ್ತು ಬೀಜಗಳ ನಡುವಿನ ಸಂಬಂಧಗಳು Figura 3 : ಸಸ್ತನಿಗಳ, ಸಗಣಿ ಜೀರುಂಡೆಗಳ ಮತ್ತು ಬೀಜಗಳ ನಡುವಿನ ಸಂಬಂಧಗಳು (A) ದಟ್ಟ, ವಿಶಾಲ ಅರಣ್ಯಗಳಲ್ಲಿ (ಯಾವುದೇ ಮಾನವ ಚಟುವಟಿಕೆಗಳಿಂದ ಬದಲಾಗದ (B) ಮಾನವ ಚಟುವಟಿಕೆಗಳಿಂದ ಸ್ವಲ್ಪ ಬದಲಾದ ಪರಿಸರದಲ್ಲಿ ಯಾವುದೇ ಸಸ್ತನಿಯ ಜಾತಿಯೊಂದು ಅಳಿಸಿ ಹೋದರೆ ಬಹಳಷ್ಟು ಜೀರುಂಡೆಗಳು ಬೇರೆ ಪ್ರಾಣಿಯ ಸಗಣಿಯ ಉಪಯೋಗಕ್ಕೆ ಸಾಮಾನ್ಯವಾಗಿ ಹೊಂದಿಕೊಳ್ಳುತ್ತವೆ (ಇದು ಮಾನವ ಚಟುವಟಿಕೆಗಳಿಂದ ಅತಿ ಹೆಚ್ಚು ಬದಲಾದ ಪರಿಸರದಲ್ಲಿ ಸಾಧ್ಯವಿಲ್ಲ) (C) ಮಾನವ ಚಟುವಟಿಕೆಗಳಿಂದ ಅತಿ ಹೆಚ್ಚು ಬದಲಾದ ಪರಿಸರದಲ್ಲಿ ಸಸ್ತನಿ, ಜೀರುಂಡೆ ಹಾಗೂ ಬೀಜಗಳ ನಡುವಿನ ಸಂಬಂಧಗಳು ಕಳೆದು ಹೋಗುತ್ತವೆ